ಕ್ಯಾಂಥರಿಡೀ

ಕೀಟವರ್ಗದ ಕೋಲಿಯಾಪ್ಟರ ಗಣ ಏಡಿಫ್ಯಾಗ ಉಪಗಣಕ್ಕೆ ಸೇರಿದ ಒಂದು ಕುಟುಂಬ. ಟೆಲಿಫೋರಿಡೀ ಎಂಬುದು ಇದರ ಪರ್ಯಾಯ ನಾಮ. ಇದಕ್ಕೆ ಸೇರಿದ ಕೀಟಗಳನ್ನು ಸೈನಿಕ ಜೀರುಂಡೆಗಳು (ಸೋಲ್ಜರ್ ಬೀಟಲ್ಸ್) ಎನ್ನಲಾಗುತ್ತದೆ. ಇವುಗಳ ದೇಹ ಮಧ್ಯಮಗಾತ್ರದ್ದು (ಸುಮಾರು ಳಿ"); ನೀಳವಾಗಿ ಕೊಳವೆಯಂತಿದೆ. ದೇಹದ ಮೇಲೆಲ್ಲ ಮೃದುಚರ್ಮ ಇದೆ. ಎಲಿಟ್ರಗಳು ಚಕ್ಕಳದಂತಿವೆ. ಕೆಲವು ಬಗೆಗಳಲ್ಲಿ ವೆಲ್ವೆಟಿನಂತಿರಬಹುದು. ಕತ್ತು ಬಹಳ ಕಿರಿದು. ಆಂಟೆನಗಳು ಎರಡು; ನೀಳವಾಗಿ ತಂತಿಯಂತೆಯೊ ಗರಗಸದಂತೆಯೊ ಇವೆ. ಒಂದೊಂದು ಆಂಟೆನದಲ್ಲೂ ಹನ್ನೊಂದು ಖಂಡಗಳಿವೆ. ಎದೆಯ ಮುಂಭಾಗ (ಪ್ರೋಥೊರ್ಯಾಕ್ಸ್) ಮಧ್ಯಭಾಗಕ್ಕಿಂತ ಹೆಚ್ಚು ಸ್ಪಷ್ಟ ಹಾಗೂ ಕಿರಿದು. ಮುಂಗಾಲುಗಳು ಬಲವಾಗಿವೆ. ಕಾಲಿನ ಟಾರ್ಸಸ್‍ನಲ್ಲಿ 5 ಖಂಡಗಳಿಂದ ಕೂಡಿದೆ. ಈ ಕೀಟಗಳ ಡಿಂಬ ಬಲು ಉದ್ದ. ಡಿಂಬ ಹಾಗೂ ಪ್ರೌಢಜೀವಿಗಳೆರಡೂ ಹಗಲಿನಲ್ಲೇ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಪರಾಗವೇ ಇವುಗಳ ಪ್ರಧಾನ ಆಹಾರ. ಕೆಲವು ಬಗೆಗಳು ಮಾತ್ರ ಬೇರೆ ಕೀಟಗಳನ್ನು ತಿನ್ನುವುದುಂಟು.

	ಕ್ಯಾಂಥರಿಡೀ ಕುಟುಂಬದಲ್ಲಿ ಸುಮಾರು 1,300 ಪ್ರಭೇದಗಳಿವೆ. ಇವುಗಳಲ್ಲಿ ಮುಖ್ಯವಾದವು-ಕ್ಯಾಂಥರಿಸ್, ಚೌಲಿಯಾನ್ಯಾತಸ್, ಡಾಸಿಟಸ್, ಮಾಲ್ತಿನಸ್, ಮಾಲ್ತೋಡಸ್, ಪೋಡೋಬ್ರಸ್, ಪೊಲೇಮಿಯಸ್ ಮತ್ತು ರ್ಯಾಗೋನೈಕ. (ಜೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ